ನವದೆಹಲಿ:
ದೆಹಲಿ ವಿಧಾನಸಭಾ ಚುನಾವಣೆ ಮತದಾನಕ್ಕೆ ಒಂದು ದಿನ ಬಾಕಿ ಇರುವಂತೆ ನಿನ್ನೆ ತಡರಾತ್ರಿಯವರೆಗೂ ಕಲ್ಕಾಜಿ ವಿಧಾನಸಭಾ ಕ್ಷೇತ್ರದಲ್ಲಿ ಗದ್ದಲ ಜೋರಾಗಿತ್ತು. ರಾಜಕೀಯ ಪಕ್ಷಗಳು ಪರಸ್ಪರ ಹಿಂಸಾಚಾರ ಮತ್ತು ನಗದು ವಿತರಣೆಯ ಆರೋಪಗಳನ್ನು ಹೊರಿಸಿವೆ. ಈ ಗದ್ದಲದ ನಡುವೆಯೇ, ದೆಹಲಿ ಮುಖ್ಯಮಂತ್ರಿ ಅತಿಶಿ ಗೋವಿಂದಪುರಿ ಪೊಲೀಸ್ ಠಾಣೆಗೆ ತಲುಪಿ ಪೊಲೀಸರಿಗೆ ದೂರು ನೀಡಿದರು. ಅದರಲ್ಲಿ ಬಿಜೆಪಿ ಕಾರ್ಯಕರ್ತರು ದೆಹಲಿಯ ಕೊಳೆಗೇರಿ ಪ್ರದೇಶಗಳ ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ದೂರು ನೀಡಿದ ನಂತರ ಪೊಲೀಸರು ತಮ್ಮ ಮತ್ತು ಎಎಪಿ ಕಾರ್ಯಕರ್ತರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಅತಿಶಿ ಆರೋಪಿಸಿದ್ದಾರೆ. ಪೊಲೀಸರ ಪ್ರಕಾರ, ಎರಡೂ ಪ್ರಕರಣಗಳು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು ಮತ್ತು ನೀತಿ ಸಂಹಿತೆಯ ಉಲ್ಲಂಘನೆಗೆ ಸಂಬಂಧಿಸಿವೆ. ದೆಹಲಿ ಚುನಾವಣಾ ಪ್ರಚಾರದ ಸಮಯ ನಿನ್ನೆ ಕೊನೆಗೊಂಡಿತ್ತು. ಆದರೆ ತಡರಾತ್ರಿಯವರೆಗೆ, ವಿವಿಧ ಪಕ್ಷಗಳ ಕಾರ್ಯಕರ್ತರು ಅನೇಕ ಸ್ಥಳಗಳಲ್ಲಿ ಪ್ರಚಾರ ನಡೆಸುತ್ತಿರುವುದು ಕಂಡುಬಂದಿತು, ಇದು ಅನೇಕ ಸ್ಥಳಗಳಲ್ಲಿ ಅವ್ಯವಸ್ಥೆಗೂ ಕಾರಣವಾಯಿತು. ಮುಖ್ಯಮಂತ್ರಿ ಅತಿಶಿ ಕ್ಷೇತ್ರ ಕಲ್ಕಾಜಿಯಲ್ಲಿ ಗರಿಷ್ಠ ಗದ್ದಲ ನಡೆಯಿತು. ಈ ಘಟನೆಯ ನಂತರ, ಗೋವಿಂದಪುರಿ ಪೊಲೀಸ್ ಠಾಣೆಯ ಪೊಲೀಸರು ಅತಿಶಿ ಮತ್ತು ಅವರ ಬೆಂಬಲಿಗರ ವಿರುದ್ಧ ನೀತಿ ಸಂಹಿತೆಯ ಉಲ್ಲಂಘನೆಯ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆಯ ಮೊದಲ ಪ್ರಕರಣದಲ್ಲಿ ದೆಹಲಿ ಪೊಲೀಸರು ಅತಿಶಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅತಿಶಿ 10 ವಾಹನಗಳು ಮತ್ತು 50-60 ಬೆಂಬಲಿಗರೊಂದಿಗೆ ಫತೇ ಸಿಂಗ್ ಮಾರ್ಗ್ ತಲುಪಿದ್ದರು ಎಂದು ಆರೋಪಿಸಲಾಗಿದೆ. ನೀತಿ ಸಂಹಿತೆಯನ್ನು ಉಲ್ಲೇಖಿಸಿ ಪೊಲೀಸರು ಅವರನ್ನು ಸ್ಥಳದಿಂದ ಹೊರಹೋಗುವಂತೆ ಆದೇಶಿಸಿದಾಗ, ಅವರು ನಿರಾಕರಿಸಿದರು. ಚುನಾವಣಾ ಆಯೋಗದ ದೂರಿನ ಮೇರೆಗೆ ಅವರ ವಿರುದ್ಧ ಈ ಪ್ರಕರಣ ದಾಖಲಾಗಿದೆ.
ತಮ್ಮ ವಿರುದ್ಧ ದೂರು ದಾಖಲಾಗುತ್ತಿದಂತೆ ದೆಹಲಿ ಮುಖ್ಯಮಂತ್ರಿ ಅತಿಶಿ ಮಂಗಳವಾರ ಬಿಜೆಪಿ ‘ಗೂಂಡಾಗಿರಿ’ಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಚುನಾವಣಾ ಆಯೋಗ ಮತ್ತು ದೆಹಲಿ ಪೊಲೀಸರು ಎಎಪಿ ನಾಯಕರು ಮತ್ತು ಸದಸ್ಯರನ್ನು ಗುರಿಯಾಗಿಸಿಕೊಂಡು ಕೇಸರಿ ಪಕ್ಷದ ಕಾರ್ಯಕರ್ತರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.