ಬೆಂಗಳೂರು: ಬಿಗ್ಬಾಸ್ ಖ್ಯಾತಿಯ ಲಾಯರ್ ಜಗದೀಶ್ (Lawyer Jagadish) ಅವರ ಮೇಲೆ ಮತ್ತೆ ಹಲ್ಲೆ ನಡೆದಿದೆ. ಜಗದೀಶ್ ಮತ್ತು ಅವರ ಪುತ್ರನ ಮೇಲೆ ಕಿಡಿಗೇಡಿಗಳು ಶುಕ್ರವಾರ ರಾತ್ರಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಜಗದೀಶ್ ಮೂಗು, ತುಟಿಗಳಿಂದ ರಕ್ತ ಹೊರಬಂದಿದೆ. ರಕ್ತ ಸುರಿಯುತ್ತಿರುವಾಗಲೇ ಫೇಸ್ ಬುಕ್ ಲೈವ್ಗೆ ಬಂದು ಘಟನೆ ಬಗ್ಗೆ ಜಗದೀಶ್ ಮಾಹಿತಿ ಹಂಚಿಕೊಂಡಿದ್ದಾರೆ.
‘ಇವತ್ತು ನಾನು ಹಾಗೂ ನನ್ನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ. ನಮ್ಮನ್ನು ಪೊಲೀಸರು ಬಂದು ಕಾಪಾಡಿದರು. ನನ್ನ ಸ್ಕಾರ್ಪಿಯೋ ಧ್ವಂಸವಾಗಿದೆ. ಧ್ವನಿ ಎತ್ತುವರರ ಮೇಲೆ ಹಲ್ಲೆ ಆಗಿದೆ. ನಮ್ಮ ಗನ್ ಮ್ಯಾನ್ ಮೇಲೆ ದೊಣ್ಣೆ ಮತ್ತು ಮಚ್ಚುಗಳಿಂದ ಹೊಡೆದಿದ್ದಾರೆ. ಎಲ್ಲಿದೆ ಕಾನೂನು ಸುವ್ಯವಸ್ಥೆ. ಸಿಎಂ ಸಿದ್ದರಾಮಯ್ಯ ಅವರೇ ಏನು ಮಾಡುತ್ತಿದ್ದೀರಿ. ಅನ್ಯಾಯದ ವಿರುದ್ಧ ಧ್ವನಿ ಎತ್ತುವವರ ಸ್ಥಿತಿ ಏನಾಗಿದೆ. ಇದು ಟೆರರಿಸ್ಟ್ ಗಳ ರಾಜ್ಯವಾಗಿದೆ ಎಂದು ಜಗದೀಶ್ ಕಿಡಿಕಾರಿದ್ದಾರೆ.
ಪೊಲೀಸ್ ಜೀಪಿನಲ್ಲಿ ಕುಳಿತುಕೊಂಡೇ ಜಗದೀಶ್ ಅವರು ಲೈವ್ ಮಾಡಿದ್ದು, ಪೊಲೀಸರು ನೀರು ಕೊಟ್ಟು ಉಪಚರಿಸುತ್ತಿರುವುದು ಲೈವ್ನಲ್ಲಿ ದಾಖಲಾಗಿದೆ. ಜಗದೀಶ್ ಮಾತ್ರವಲ್ಲದೆ ಅವರ ಪುತ್ರನ ಮೇಲೂ ಹಲ್ಲೆ ಆಗಿದ್ದು, ಪುತ್ರನಿಗೂ ಸಹ ಮುಖ, ಕಿವಿಗೆ ಗಾಯಗಳಾಗಿವೆ. ಈ ಬಗ್ಗೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ಲಾಯರ್ ಜಗದೀಶ್ ದೂರು ನೀಡಿದ್ದಾರೆ.
ಕೆಲವು ಪುಡಿ ರೌಡಿಗಳು ನಮ್ಮ ಮೇಲೆ ದಾಳಿ ಮಾಡಿದ್ದಾರೆ. ನನ್ನನ್ನು, ನನ್ನ ಕುಟುಂಬವನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾರೆ. ಕರ್ನಾಟಕದಲ್ಲಿ ಪೊಲೀಸರಿಗಿಂತಲೂ ಪುಡಿ ರೌಡಿಗಳೇ ಮೆರೆದಾಡುತ್ತಿದ್ದಾರೆ. ಪುಡಿ ರೌಡಿಗಳು ಕಾನೂನಿಗಿಂತ ಮೇಲೆ ಬೆಳೆದು ಬಿಟ್ಟಿದ್ದಾರೆ. ಕರ್ನಾಟಕದ ಧ್ವನಿಯಾಗಿದ್ದ ನನ್ನನ್ನು ಹತ್ತಿಕ್ಕುವ ಪ್ರಯತ್ನ ಇದಾಗಿದೆ’ ಎಂದು ಜಗದೀಶ್ ಆಕ್ರೋಶ ಹೊರಹಾಕಿದ್ದಾರೆ.
ಈ ಸುದ್ದಿಯನ್ನೂ ಓದಿ | Lawyer Jagadish: ದರ್ಶನ್ ಫ್ಯಾನ್ಸ್ ಗಲೀಜು, ಗನ್ ಲೈಸೆನ್ಸ್ ಇದ್ದಿದ್ರೆ ಗುಂಡ್ ಹಾರಿಸ್ತಿದ್ದೆ ಎಂದ ವಕೀಲ್ ಸಾಬ್!
ಸುಮಾರು 500ಕ್ಕೂ ಹೆಚ್ಚು ಜನ, ಮದ್ಯ ಸೇವಿಸಿ, ಗಾಂಜಾ ಮತ್ತಿನಲ್ಲಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ. ನಾವ್ಯಾರನ್ನೂ ನ್ಯಾಯ ಕೇಳುವುದಿಲ್ಲ ಏಕೆಂದರೆ ನ್ಯಾಯವೇ ಅನ್ಯಾವಾಗಿ ಮಾರ್ಪಾಡಾಗಿದೆ. ನನ್ನ ಜೀವ ಹೋದರೂ ನಾನು ಕೇರ್ ಮಾಡಲ್ಲ. ಆದರೆ ಅನ್ಯಾಯ ಗೆಲ್ಲಬಾರದು. ಕಾನೂನು ಸುವ್ಯವಸ್ಥೆ ಎಂಬುದು ರಾಜ್ಯದಲ್ಲಿ ಇಲ್ಲದಾಗಿದೆ. ಏನಾದರೂ ಆಗಲಿ ನಾನು ನನ್ನ ನಿಲುವನ್ನು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ವಕೀಲ ಜಗದೀಶ್ ಅವರ ಮೇಲೆ ನಗರದ ಕೊಡಿಗೇಹಳ್ಳಿಯಲ್ಲಿ ಗುರುವಾರ ಹಲ್ಲೆ ನಡೆದಿತ್ತು. ನಟ ದರ್ಶನ್ ವಿರುದ್ಧ ಮಾತನಾಡಿದ್ದಕ್ಕೆ ಅಭಿಮಾನಿಗಳೇ ಅವರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿತ್ತು. ಆದರೆ, ಶುಕ್ರವಾರ ಮಧ್ಯಾಹ್ನ ಮತ್ತೆ ವಿಡಿಯೊ ಮಾಡಿದ್ದ ಲಾಯರ್ ಜಗದೀಶ್ ಅವರು, ದರ್ಶನ್ ಮತ್ತು ಅವರ ಫ್ಯಾನ್ಸ್ ವಿರುದ್ಧ ಕಿಡಿಕಾರಿದ್ದರು. ದರ್ಶನ್ ಹೆಸರು ಬಳಸಿ ನನ್ನ ಮೇಲೆ ಅಟ್ಯಾಕ್ ಮಾಡಿರುವವರು ಗಲೀಜು ಫ್ಯಾನ್ಸ್ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಮತ್ತೆ ವಕೀಲ ಜಗದೀಶ್ ಅವರ ಮೇಲೆ ಹಲ್ಲೆ ನಡೆದಿದೆ.