ವಾಷಿಂಗ್ಟನ್:
ಯಮೆನ್ನಲ್ಲಿ ಹೌತಿ ಬಂಡುಕೋರರ ಮೇಲೆ ಬಾಂಬ್ ದಾಳಿ ನಡೆಸಿರುವ ವಿಡಿಯೋವನ್ನು ಹಂಚಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, “Oops” ಎಂದು ಬರೆದುಕೊಂಡಿದ್ದಾರೆ. ಅಮೆರಿಕದ ಹಡಗುಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಕಾರವಾಗಿ ಹೌತಿಗಳ ಮೇಲೆ ಅಮೆರಿಕದ ವಾಯು ಪಡೆ ಹಲವು ದಾಳಿಗಳನ್ನು ನಡೆಸಿದೆ. ಮಿಲಿಟರಿ ಡ್ರೋನ್ ಅಥವಾ ವಿಮಾನದಿಂದ ತೆಗೆದ ದೃಶ್ಯಗಳಂತೆ ಕಾಣುವ ಈ ವಿಡಿಯೋದಲ್ಲಿ, ಹಲವಾರು ಜನರು ಸುತ್ತು ಹಾಕಿ ನಿಂತಿರುವುದು ಕಂಡು ಬಂದಿದೆ. ಏಕಾಏಕಿ ಬಾಂಬ್ ದಾಳಿ ನಡೆದಾಗ ಪ್ರಕಾಶಮಾನವಾದ ಬೆಳಕು ಕಾಣಿಸಿಕೊಂಡಿದ್ದು, ಬಳಿಕ ದೊಡ್ಡ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿದೆ. ಹೊಗೆ ಮಾಯವಾಗುತ್ತಿದ್ದಂತೆಯೇ ಡಜನ್ಗಟ್ಟಲೆ ಜನರು ಸತ್ತು ಬಿದ್ದಿರುವ ದೃಶ್ಯವನ್ನು ಡೊನಾಲ್ಡ್ ಟ್ರಂಪ್ ಶೇರ್ ಮಾಡಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ವಿಡಿಯೋಗೆ ಶೀರ್ಷಿಕೆ ನೀಡಿರುವ ಅಧ್ಯಕ್ಷ ಟ್ರಂಪ್, ಈ ಹೌತಿಗಳು ದಾಳಿ ನಡೆಸುವ ಸಲುವಾಗಿ ಒಟ್ಟುಗೂಡಿದ್ದರು. Oops, ಈ ಹೌತಿಗಳಿಂದ ಇನ್ನು ಮುಂದೆ ಯಾವುದೇ ದಾಳಿಗಳು ನಡೆಯುವುದಿಲ್ಲ! ಅವರು ಮತ್ತೆಂದೂ ನಮ್ಮ ಹಡಗುಗಳನ್ನು ಮುಳುಗಿಸುವುದಿಲ್ಲ! ಎಂದು ಬರೆದಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಯೆಮೆನ್ನಲ್ಲಿ ಬಂಡಾಯ ಗುಂಪಿನ ಮೇಲೆ ಅಮೆರಿಕ ಹಲವಾರು ದಾಳಿಗಳನ್ನು ನಡೆಸಿದೆ ಎಂದು ವರದಿಯಾಗಿದೆ. ಕೆಂಪು ಸಮುದ್ರದಲ್ಲಿ ಸಾಗುವ ಹಡಗುಗಳನ್ನು ಗುರಿಯಾಗಿಸಿ ಬಂಡುಕೋರರ ಗುಂಪು ದಾಳಿ ನಡೆಸಿದ್ದಕ್ಕೆ ಪ್ರತಿಕಾರವಾಗಿ ಅಮೆರಿಕ ದಾಳಿ ನಡೆಸಿದೆ. ಯೆಮೆನ್ನಲ್ಲಿ ಬಂಡುಕೋರರಿಂದ ನಿಯಂತ್ರಿಸಲ್ಪಟ್ಟ ಪ್ರದೇಶಗಳ ಮೇಲೆ ಬುಧವಾರ ಅಮೆರಿಕದ ದಾಳಿ ನಡೆಸಿದ್ದು, ಇದರಿಂದಾಗಿ ಸುಮಾರು ಆರು ಜನರು ಸಾವನ್ನಪ್ಪಿದ್ದಾರೆ ಎಂದು ಹೌತಿಗಳು ಹೇಳಿದ್ದಾಗ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
2023ರ ಅಕ್ಟೋಬರ್ನಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಭುಗಿಲೆದ್ದ ನಂತರ, ಗಾಜಾಗೆ ಬೆಂಬಲ ನೀಡುವ ಸಲುವಾಗಿ ಹೌತಿಗಳು ಕೆಂಪು ಸಮುದ್ರವನ್ನು ದಾಟುತ್ತಿರುವ ಅಮೆರಿಕದ ಹಡಗುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಹೌತಿ ಅಂಕಿಅಂಶಗಳ ಪ್ರಕಾರ, ಅಮೆರಿಕದ ದಾಳಿಯಲ್ಲಿ ಇಲ್ಲಿಯವರೆಗೆ 67 ಜನರು ಸಾವನ್ನಪ್ಪಿದ್ದಾರೆ.
ಹೌತಿಗಳ ಮೇಲಿನ ದಾಳಿಯಿಂದಾಗಿ ಇರಾನ್ ದುರ್ಬಲಗೊಂಡಿದೆ. ಅಮೆರಿಕದ ಹಡುಗಗಳ ಮೇಲೆ ದಾಳಿ ನಡೆಸಿದ ಹೌತಿ ನಾಯಕರನ್ನು ಇರಾನ್ ಹೊರಗಟ್ಟಿದೆ. ಇರಾನ್ ನಂಬಲಾರದಷ್ಟು ಮಟ್ಟಕ್ಕೆ ದುರ್ಬಲಗೊಂಡಿದ್ದು, ಕಪ್ಪು ಸಮುದ್ರದಲ್ಲಿ ಹಡಗುಗಳ ಸಂಚಾರ ಮತ್ತೆ ಸಾಮಾನ್ಯ ಸ್ಥಿತಿಗೆ ಬರುವವರೆಗೆ ದಾಳಿ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಮಂಗಳವಾರ ಹೇಳಿದ್ದರು.