ನವದೆಹಲಿ
ತಿಂಗಳು ಪೂರ್ತಿ ಕೆಲಸ ಮಾಡಿ ಬೇಸರವಾದಾಗ ಕೆಲವು ಕೆಲಸಗಾರರು ರಜೆ ಹಾಕಲು ಕುಂಟು ನೆಪ ಹುಡುಕುತ್ತಿರುತ್ತಾರೆ. ಹೀಗಿರುವಾಗ ಪುಣೆ ಮೂಲದ ಮೇಕಪ್ ಕಲಾವಿದೆಯೊಬ್ಬಳು ಕೆಲಸದಲ್ಲಿ ರಜೆ ಪಡೆಯಲು ನೆಪಗಳಿಗಾಗಿ ಅಪಘಾತವಾದ ಗಾಯದ ಗುರುತುಗಳನ್ನು ಹೇಗೆ ನಕಲಿ ಮಾಡುವುದು ಎಂಬುದನ್ನು ತೋರಿಸುವ ವಿಡಿಯೊಗಳನ್ನು ಹರಿಬಿಟ್ಟಿದ್ದಾಳೆ. ಇದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಬಿಸಿ ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕೆಲಸದ ಸ್ಥಳದಲ್ಲಿ ಅಪ್ರಾಮಾಣಿಕತೆಯನ್ನು ಉತ್ತೇಜಿಸುತ್ತದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಮೇಕಪ್ ಕಲಾವಿದೆ ಪ್ರೀತಮ್ ಜುಜರ್ ಕೊಥಾವಾಲಾ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೊಗಳನ್ನು ಹಂಚಿಕೊಂಡಿದ್ದಾಳೆ. ಮೊದಲ ವಿಡಿಯೊದಲ್ಲಿ, ಅವಳು ಅಪಘಾತವಾದಂತೆ ಕಾಣುವ ಗಾಯಗಳನ್ನು ಹೇಗೆ ರಚಿಸುವುದು ಎಂಬುದನ್ನು ತೋರಿಸಿದ್ದಾಳೆ. ಅದರ ಜೊತೆಗೆ ಈ ವಿಷಯವು ಸಂಪೂರ್ಣವಾಗಿ ಮನೋರಂಜನೆಗಾಗಿ ಮಾಡಿರುವುದು ಇದನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಒತ್ತಿ ಹೇಳಿದ್ದಾಳೆ.
ವಿಡಿಯೊ ವೈರಲ್ ಆದ ನಂತರ, ನಕಲಿ ಗಾಯದ ನಂತರ ಕೆಲಸಕ್ಕೆ ಮರಳುವಾಗ ಅದರ ಕಲೆಯನ್ನು ಹೇಗೆ ತೋರಿಸುವುದು ಎಂದು ಕೆಲವು ನೆಟ್ಟಿಗರು ಕೇಳಿದ್ದಾರೆ. ಹಾಗಾಗಿ ಅವಳು ಇನ್ನೊಂದು ವಿಡಿಯೊದಲ್ಲಿ, ಕೆಲಸಕ್ಕೆ ಮರಳಿದ ನಂತರ ನಕಲಿ ಗಾಯಗಳು ನಿಜವಾದುದು ಎಂದು ತೋರಿಸಲು ಅದರ ಕಲೆಗಳಿರುವಂತೆ ಹೇಗೆ ಮೇಕಪ್ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.
ಅವಳು ಈ ವಿಡಿಯೊವನ್ನು ತಮಾಷೆಗಾಗಿ ಮಾಡಿದ್ದರೂ ಕೂಡ ಈ ವಿಡಿಯೊಗಳು ಸೋಶಿಯಲ್ ಮಿಡಿಯಾದಲ್ಲಿ ಟೀಕೆಗಳಿಗೆ ಕಾರಣವಾಗಿದ್ದವು. ಕೊಥಾವಾಲಾ ಕೆಲಸದ ಸ್ಥಳದಲ್ಲಿ ಅಪ್ರಾಮಾಣಿಕತೆಯಿಂದ ವರ್ತಿಸಲು ಜನರಿಗೆ ಪ್ರೋತ್ಸಾಹ ನೀಡಿದ್ದಾಳೆ ಎಂದು ಅನೇಕ ನೆಟ್ಟಿಗರು ಆರೋಪಿಸಿದ್ದಾರೆ.ಈ ವಿಡಿಯೊಗೆ ಅನೇಕರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬರು ಕಾಮೆಂಟ್ ಮಾಡಿ, “ಇದು ತಮಾಷೆಯಲ್ಲ. ಇದು ಅಪಾಯಕಾರಿ. ಇದು ಕೆಲಸದ ಸ್ಥಳದಲ್ಲಿ ಅಪ್ರಾಮಾಣಿಕತೆಯನ್ನು ಉತ್ತೇಜಿಸುತ್ತದೆ.” ಎಂದಿದ್ದಾರೆ.”ಇದು ಉದ್ಯೋಗಿಗಳು ಮತ್ತು ಬಾಸ್ಗಳ ನಡುವಿನ ನಂಬಿಕೆಯನ್ನು ದುರ್ಬಲಗೊಳಿಸುವ ಅವಮಾನಕರ ಪ್ರಯತ್ನವಾಗಿದೆ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಕೆಲಸದಿಂದ ರಜೆ ಪಡೆದುಕೊಳ್ಳಲು ಜನರು ನಕಲಿ ದಾಖಲೆಗಳನ್ನು ತೋರಿಸುವ ಘಟನೆಗಳು ಆಗಾಗ ನಡೆಯುತ್ತಿರುತ್ತದೆ. ಸಿಂಗಾಪುರದಲ್ಲಿ ಕೆಲಸದಿಂದ ಒಂಬತ್ತು ದಿನಗಳ ರಜೆ ತೆಗೆದುಕೊಳ್ಳಲು ವೈದ್ಯಕೀಯ ಪ್ರಮಾಣಪತ್ರವನ್ನು ನಕಲಿ ಮಾಡಿದ್ದಕ್ಕಾಗಿ 37 ವರ್ಷದ ಚೀನಾದ ಮಹಿಳೆಗೆ ಸಿಂಗಾಪುರದ ನ್ಯಾಯಾಲಯವು 5,000 ಯುಎಸ್ ಡಾಲರ್ (3,26,681 ರೂ.) ದಂಡ ವಿಧಿಸಿತ್ತು. 37 ವರ್ಷದ ಸಾಫ್ಟ್ವೇರ್ ಡೆವಲಪರ್ ಸು ಕ್ವಿನ್ ಇಟಿಸಿ ಸಿಂಗಾಪುರ್ ಎಸ್ಇಸಿಯಲ್ಲಿ ಕೆಲಸ ಮಾಡುತ್ತಿದ್ದಳು.
ವರದಿ ಪ್ರಕಾರ, ಅವಳು ತನ್ನ ಆರೋಗ್ಯ ಸಮಸ್ಯೆಗಳು ಮತ್ತು ತಾಯಿಯ ಯೋಗಕ್ಷೇಮದ ಬಗ್ಗೆ ಕಾಳಜಿಯಿಂದಾಗಿ ವಿರಾಮ ತೆಗೆದುಕೊಳ್ಳಲು ಬಯಸಿದ್ದಳು. ಆದರೆ ಅವಳಿಗೆ ಕಂಪನಿಗೆ ಮೋಸ ಮಾಡುವ ಉದ್ದೇಶವಿರಲಿಲ್ಲ. ಹೀಗಾಗಿ ನಿಯಮಿತ ರಜೆ ತೆಗೆದುಕೊಳ್ಳುವ ಬದಲು, ಅವಳು ವೈದ್ಯಕೀಯ ಪ್ರಮಾಣಪತ್ರವನ್ನು ನಕಲಿ ಮಾಡಲು ಮುಂದಾದಳು ಎನ್ನಲಾಗಿತ್ತು.