ಬೆಂಗಳೂರು:
ಕೆಎಸ್ ಆರ್ ಟಿಸಿ ಕಂಡಕ್ಟರ್ ಮೇಲೆ ಮರಾಠಿಗರ ಹಲ್ಲೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಿರುವ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಕನ್ನಡಪರ ಹೋರಾಟಗಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನಾ ಮೆರವಣಿಗೆಗೆ ಮುಂದಾದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಸಾ.ರಾ ಗೋವಿಂದು ಸೇರಿದಂತೆ ಅನೇಕ ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ಬಸ್ ನಲ್ಲಿ ಕರೆದೊಯ್ದರು.
ಬಳಿಕ ಫ್ರೀಡಂ ಪಾರ್ಕ್ ನಲ್ಲಿ ದೊಡ್ಡ ಹೈಡ್ರಾಮವೇ ನಡೆಯಿತು. ಬಸ್ ನಿಂದ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದ ವಾಟಾಳ್ ನಾಗರಾಜ್, ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿದೆ. ಆದರೆ ರಾಜ್ಯ ಸರ್ಕಾರ ಪೊಲೀಸರ ಮೂಲಕ ಬಂದ್ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು. ಪೊಲೀಸ್ ರಾಜ್ಯ, ಪೊಲೀಸ್ ಗೂಂಡಾಗಿರಿ ಎಂದು ಆಕ್ರೋಶ ವ್ಯಕ್ತಪಡಿದರು.
ಟೌನ್ ಹಾಲ್ ಬಳಿ ಮಾತ್ರ ಪ್ರತಿಭಟನೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಬಸ್ ನಿಂದ ಇಳಿಯುವುದಿಲ್ಲ. ರಾಜ್ಯ ನೆಲ, ಜಲ, ಭಾಷೆ ಪರ ನಮ್ಮ ಹೋರಾಟ ನಿರಂತರವಾದದ್ದು ಎಂದು ಹೇಳಿದರು. ಇದಕ್ಕೂ ಮುನ್ನಾ ವಾಟಾಳ್ ನಾಗರಾಜ್ ಅವರ ಮನೆಯಲ್ಲಿ ಸಭೆ ನಡೆಸಿದ ಮುಖಂಡರು ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೂ ಪ್ರತಿಭಟನಾ ಮೆರವಣಿಗೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಎಲ್ಲಾ ಜಿಲ್ಲೆಗಳಲ್ಲಿ ಬಂದ್ ಅವರದ್ದೇ ರೂಪದಲ್ಲಿ ನಡೆದಿದೆ. ಕನ್ನಡಿಗರಿಗಾಗಿ ಕರೆದ ಬಂದ್ ಯಶಸ್ವಿ ಆಗಿದೆ. ಬಂದ್ನ ಬೇಡಿಕೆ ಎಲ್ಲವನ್ನೂ ಜನರ ಮುಂದೆ ಸರ್ಕಾರದ ಮುಂದೆ ಇಟ್ಟಿದ್ದೇವೆ ಎಂದರು.