ಗಾಂಧಿನಗರ:
ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನದ ಗುಜರಾತ್ ಪ್ರವಾಸದಲ್ಲಿದ್ದಾರೆ. ಇಂದು ಅವರು ಜಾಮ್ನಗರದಲ್ಲಿರುವ ಅನಂತ್ ಅಂಬಾನಿಯವರ ವಂತಾರಾ ವನ್ಯಜೀವಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರವನ್ನು ಉದ್ಘಾಟಿಸಿದ್ದಾರೆ. ವಂತಾರಾ ವಿಶ್ವದ ಅತಿದೊಡ್ಡ ವನ್ಯಜೀವಿ ರಕ್ಷಣಾ ಮತ್ತು ಸಂರಕ್ಷಣಾ ಕೇಂದ್ರಗಳಲ್ಲಿ ಒಂದಾಗಿದ್ದು, 2,000 ಕ್ಕೂ ಹೆಚ್ಚು ಜಾತಿಗಳಿಂದ 150,000 ಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಮತ್ತು ನಿರಾಶ್ರಿತ ಪ್ರಾಣಿಗಳಿಗೆ ನೆಲೆಯಾಗಿದೆ. ವಂತಾರದಲ್ಲಿ ಎಂಆರ್ಐ, ಸಿಟಿ ಸ್ಕ್ಯಾನ್ ಮತ್ತು ಐಸಿಯು ಇರುವ ಆಧುನಿಕ ಆಸ್ಪತ್ರೆ ಕೂಡ ಇದೆ. ಒಟ್ಟು 3500 ಎಕರೆ ವಿಸ್ತೀರ್ಣದಲ್ಲಿ ಇದನ್ನು ನಿರ್ಮಿಸಲಾಗಿದೆ.
ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಅಪರೂಪದ ಚಿರತೆ ಮರಿ ಮತ್ತು ವಂತಾರದಲ್ಲೇ ಹುಟ್ಟಿದ್ದ ಬಿಳಿ ಸಿಂಹದ ಮರಿಗೆ ಮೋದಿ ಅವರೇ ಆಹಾರ ನೀಡಿದ್ದಾರೆ. ಅಳಿವಿನ ಅಂಚಿನಲ್ಲಿರೋ ಈ ಜಾತಿಗಳ ಸಂತಾನೋತ್ಪತ್ತಿ ಹೇಗೆ ಮಾಡುತ್ತವೆ ಎಂದು ಮೋದಿ ಅವರಿಗೆ ವಿವರಿಸಲಾಯಿತು. ಹುಲಿ, ಬಿಳಿ ಚಿರತೆ, ಸರ್ಕಸ್ನಿಂದ ರಕ್ಷಿಸಿ ತಂದಿದ್ದ ನಾಲ್ಕು ಬಿಳಿ ಹುಲಿಗಳ ಜೊತೆ ಮೋದಿ ಕಾಲ ಕಳೆದಿದ್ದಾರೆ. ಒರಾಂಗುಟಾನ್ ಮರಿಗಳನ್ನು ಮೋದಿ ಮುದ್ದಿಸಿದ್ದಾರೆ. ದೊಡ್ಡ ಹೆಬ್ಬಾವು, ಎರಡು ತಲೆ ಇರುವ ಹಾವು ಮತ್ತು ಎರಡು ತಲೆ ಇರೋ ಆಮೆಯನ್ನು ಕೂಡ ಅವರು ವೀಕ್ಷಿಸಿದ್ದಾರೆ.
ವಂತಾರಾದಲ್ಲಿ ಆನೆಗಳಿಗೆ ಸಂಧಿವಾತ ಮತ್ತು ಕಾಲಿನ ಸಮಸ್ಯೆಯಿಂದ ಮುಕ್ತಿ ಸಿಗಲು ವಿಶೇಷವಾದ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಏಷ್ಯಾಟಿಕ್ ಸಿಂಹದ ಮೇಲೆ ನಡೆಸಲಾಗುತ್ತಿರುವ ಎಂಆರ್ಐ ಮತ್ತು ಹೆದ್ದಾರಿ ಅಪಘಾತದಲ್ಲಿ ಗಾಯಗೊಂಡ ಚಿರತೆಯ ಜೀವ ಉಳಿಸುವ ಶಸ್ತ್ರಚಿಕಿತ್ಸೆಯನ್ನು ಪ್ರಧಾನಿ ವೀಕ್ಷಿಸಿದ್ದಾರೆ.
ವನ್ಯಜೀವಿ ಅರಿವಳಿಕೆ, ಹೃದ್ರೋಗ, ಮೂತ್ರಪಿಂಡ ಶಾಸ್ತ್ರ, ಎಂಡೋಸ್ಕೋಪಿ ಮತ್ತು ದಂತ ಚಿಕಿತ್ಸೆಗೆ ಸಂಬಂಧಿಸಿದ ವಿಶೇಷ ವಿಭಾಗಗಳನ್ನು ಒಳಗೊಂಡಿರುವ ವಂಟಾರಾದ ಅತ್ಯಾಧುನಿಕ ಆಸ್ಪತ್ರೆಗೂ ಅವರು ಭೇಟಿ ನೀಡಿದ್ದಾರೆ. ವಂತಾರಾದಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು, ಸಿಬ್ಬಂದಿ ಮತ್ತು ಕಾರ್ಮಿಕರ ಜೊತೆ ಮೋದಿ ಮಾತನಾಡಿದ್ದಾರೆ ಹಾಗೂ ವನ್ಯ ಜೀವಿಗಳ ರಕ್ಷಣೆಯಲ್ಲಿ ವಂತಾರದ ಪಾತ್ರವನ್ನು ಅವರು ಹೊಗಳಿದ್ದಾರೆ.