ಬೆಂಗಳೂರು:
ಬೆಂಗಳೂರಿನಲ್ಲಿ 12.35 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂಬ ಬಿಜೆಪಿ ನಾಯಕರೊಬ್ಬರ ಆರೋಪವನ್ನು ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು ಬುಧವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಅಲ್ಲದೆ ಭಾರತದಲ್ಲಿ ತಾವು ಯಾವುದೇ ಭೂಮಿ, ಮನೆ ಅಥವಾ ಷೇರುಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನ ಯಲಹಂಕದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಐದು ಹಿರಿಯ ಸರ್ಕಾರಿ ಅಧಿಕಾರಿಗಳ ಸಹಾಯದಿಂದ ಸ್ಯಾಮ್ ಪಿತ್ರೋಡಾ ಅವರು 150 ಕೋಟಿ ರೂ. ಮೌಲ್ಯದ 12.35 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಎನ್ ಆರ್ ರಮೇಶ್ ಆರೋಪಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಾಜಿ ಕೌನ್ಸಿಲರ್ ಆಗಿರುವ ರಮೇಶ್ ಅವರು ಈ ಸಂಬಂಧ ಜಾರಿ ನಿರ್ದೇಶನಾಲಯ ಮತ್ತು ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಎಕ್ಸ್ನಲ್ಲಿ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪಿತ್ರೋಡಾ, “ಭಾರತೀಯ ಮಾಧ್ಯಮಗಳಲ್ಲಿ, ದೂರದರ್ಶನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಇತ್ತೀಚೆಗೆ ಬಂದ ವರದಿಗಳ ಹಿನ್ನೆಲೆಯಲ್ಲಿ, ನಾನು ಈ ಕೆಳಗಿನವುಗಳನ್ನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ: ನಾನು ಭಾರತದಲ್ಲಿ ಯಾವುದೇ ಭೂಮಿ, ಮನೆ ಅಥವಾ ಷೇರುಗಳನ್ನು ಹೊಂದಿಲ್ಲ” ಎಂದಿದ್ದಾರೆ.