ನವದೆಹಲಿ:
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನಾಡುತ್ತಿರುವ ವಿದೇಶಿ ತಂಡಗಳಿಗೆ ಮತ್ತು ಪಂದ್ಯ ವೀಕ್ಷಣೆಗೆ ಬಂದಿರುವ ಅಭಿಮಾನಿಗಳು ಭಾರೀ ಆತಂಕಪಡುವ ಸುದ್ದಿಯೊಂದು ಹೊರಬಿದ್ದಿದೆ. ವಿದೇಶಿ ಅತಿಥಿಗಳನ್ನು ವಿಮೋಚನೆಗಾಗಿ ಅಪಹರಿಸಲು ಸಕ್ರಿಯ ರಹಸ್ಯ ಗುಂಪುಗಳು ಸಂಚು ರೂಪಿಸಿವೆ ಎಂದು ಪಾಕಿಸ್ತಾನದ ಗುಪ್ತಚರ ಇಲಾಖೆ ಸೋಮವಾರ ದೇಶದ ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಿದೆ.
ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (TTP), ಐಸಿಸ್ ಮತ್ತು ಇತರ ಬಲೂಚಿಸ್ತಾನ ಮೂಲದ ಗುಂಪುಗಳು ಸೇರಿದಂತೆ ಹಲವಾರು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚಿದ ಭದ್ರತಾ ವ್ಯವಸ್ಥೆ
ಗುಪ್ತಚರ ಇಲಾಖೆ ಈ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಕಿಸ್ತಾನದಲ್ಲಿರುವ ಆಟಗಾರರು ಮತ್ತು ಅವರ ಜತೆಗಿರುವ ಸಿಬ್ಬಂದಿಯ ಸುರಕ್ಷತೆಯನ್ನು ಕಾಪಾಡಲು ಪಾಕ್ ಸರಕಾರ ಹೆಚ್ಚಿನ ಭದ್ರತೆಯನ್ನು ರೂಪಿಸಿದೆ. ಈಗಿರುವ ಭದ್ರತೆಯ ಜತೆಗೆ ಸ್ಥಳೀಯ ಪೊಲೀಸರು ಸೇರಿದಂತೆ ಉನ್ನತ ಮಟ್ಟದ ರಕ್ಷಣಾ ತಂಡಗಳನ್ನು ನಿಯೋಜಿಸಿವೆ ಎಂದು ತಿಳಿದುಬಂದಿದೆ. ಜತೆಗೆ ಪಂದ್ಯಕ್ಕೂ ಪೊಲೀಸರಿಂದ ಭಾರೀ ಬಿಗಿ ಬಂದೋಬಸ್ತ್ ಮಾಡಲಿದೆ. ಆದರೂ ಇಲ್ಲಿನ ಭದ್ರತಾ ವ್ಯವಸ್ಥೆ ಬಗ್ಗೆ ಆತಂಕ ಹೆಚ್ಚಿದೆ.
ಇದೇ ಕಾರಣಕ್ಕೆ ಬದ್ಧವೈರಿ ಪಾಕಿಸ್ತಾನದ ನೆಲಕ್ಕೆ ತನ್ನ ಕ್ರಿಕೆಟ್ ತಂಡ ಕಾಲಿಡಲು ಕೇಂದ್ರ ಸರ್ಕಾರ ಮತ್ತು ಬಿಸಿಸಿಐ ಬಿಡಲಿಲ್ಲ. ಭಾರತ ತಂಡವನ್ನು ಪಾಕ್ ನೆಲಕ್ಕೆ ಹೇಗಾರೂ ಮಾಡಿ ಕರೆಸಿಕೊಳ್ಳಬೇಕೆಂದು ಪಾಕ್ ಶತ ಪ್ರಯತ್ನ ಮಾಡಿತ್ತು. ಆದರೆ ಬಿಸಿಸಿಐ ಟೂರ್ನಿಯಿಂದ ಹಿಂದೆ ಸರಿದರೂ ಬೇಸರವಿಲ್ಲ ಆದರೆ ಪಾಕಿಗೆ ಕಾಲಿಡುವುದಿಲ್ಲ ಎಂದು ಕಡ್ಡಿ ಮುರಿದಂತೆ ತನ್ನ ನಿಲವನ್ನು ತಿಳಿಸಿತ್ತು. ಕೊನೆಗೆ ಮಂಡಿಯೂರಿದ ಪಾಕ್ ಹೈಬ್ರೀಡ್ ಮಾದರಿಗೆ ಒಪ್ಪಿಕೊಂಡಿತು. ಹೀಗಾಗಿ ಭಾರತ ತನ್ನ ಪಂದ್ಯವನ್ನು ತಟಸ್ಥ ತಾಣವಾದ ದುಬೈನಲ್ಲಿ ಆಡುತ್ತಿದೆ.