ಕೋಲ್ಕತ್ತಾ:
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿನ ಅವ್ಯವಸ್ಥೆಗಾಗಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು.’ಮಹಾ ಕುಂಭವು ‘ಮೃತ್ಯು ಕುಂಭ’ವಾಗಿ ಮಾರ್ಪಟ್ಟಿದೆ’ ಎಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಂಗಳವಾರ ಹೇಳಿದರು.
‘ನಾನು ಮಹಾಕುಂಭವನ್ನು ಗೌರವಿಸುತ್ತೇನೆ, ಪವಿತ್ರ ಗಂಗಾ ಮಾತೆಯನ್ನು ನಾನು ಗೌರವಿಸುತ್ತೇನೆ. ಆದರೆ, ಅಲ್ಲಿ ಯಾವುದೇ ರೀತಿಯ ವ್ಯವಸ್ಥೆಯನ್ನು ಕೈಗೊಂಡಿಲ್ಲ. ಶ್ರೀಮಂತರು, ವಿಐಪಿಗಳಿಗೆ ₹ 1 ಲಕ್ಷ ನೀಡಿ ಶಿಬಿರಗಳನ್ನು ಪಡೆಯಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಆದರೆ, ಬಡವರಿಗೆ ಕುಂಭದಲ್ಲಿ ಯಾವುದೇ ವ್ಯವಸ್ಥೆಗಳನ್ನು ಮಾಡಿಲ್ಲ. ‘ಮೇಳ’ದಲ್ಲಿ ಕಾಲ್ತುಳಿತದ ಪರಿಸ್ಥಿತಿ ಸಾಮಾನ್ಯವಾಗಿದೆ. ಆದರೆ, ನೀವು ಏನು ಮಾಡಿದ್ದೀರಿ ಎಂಬುದು ಮುಖ್ಯ’ ಎಂದು ದೂರಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಾಂಗ್ಲಾದೇಶದ ಮೂಲಭೂತವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ಸಾಬೀತುಪಡಿಸಲು ಬಿಜೆಪಿಗೆ ಸವಾಲೆಸೆದರು ಮತ್ತು ಇದು ಸಾಬೀತಾದರೆ ರಾಜೀನಾಮೆ ನೀಡುವುದಾಗಿ ಹೇಳಿದರು.
‘ಬಾಂಗ್ಲಾದೇಶಿ ಮೂಲಭೂತವಾದಿಗಳೊಂದಿಗೆ ಮಮತಾ ಕೈಜೋಡಿಸುತ್ತಿದ್ದಾರೆ’ ಎಂದು ಆರೋಪಿಸಿದ ಬಿಜೆಪಿ ಶಾಸಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬಿಜೆಪಿ ತನ್ನ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಧರ್ಮವನ್ನು ಬಳಸುತ್ತಿದೆ. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಬಿಜೆಪಿ ಶಾಸಕರು ದ್ವೇಷವನ್ನು ಹರಡಲು ಮತ್ತು ಜನರನ್ನು ವಿಭಜಿಸಲು ಬಿಡುವುದಿಲ್ಲ ಎಂದು ಹೇಳಿದರು.